ಸಿನಿಮಾ: ಚಂಬಲ್

ತಾರಾಗಣ: ನಿನಾಸಂ ಸತೀಶ್, ಸೋನು ಗೌಡ, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಪವನ್ ಕುಮಾರ್

ನಿರ್ದೇಶನ: ಜೇಕಬ್ ವರ್ಗೀಸ್

ಸಂಗೀತ: ಪೂರ್ಣಚಂದ್ರ ತೇಜಸ್ವಿ, ಜೂಡಾ ಸ್ಯಾಂಡಿ

ನಿರ್ಮಾಣ: ಜೇಕಜ್ ಫಿಲ್ಮ್ಸ್

.
ಡಿ ಕೆ ರವಿ , ಇದೊಂದು ಹೆಸರು ಎರಡು ವರ್ಷಗಳ ಹಿಂದೆ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲಿ ಕೇಳಿ ಬಂದ ಹೆಸರು. ನಿಷ್ಠಾವಂತ, ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಅವರು ಇದ್ದಕ್ಕಿದ್ದ ಹಾಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಾಗ ಸಾಕಷ್ಟು ಜನ ಇದು ಕೊಲೆ ಎಂದರೆ, ಮತ್ತೊಂದಿಷ್ಟು ಜನ ಇದು ಆತ್ಮಹತ್ಯೆ ಎಂದರು. ಆದರೆ ಸರಿಯಾದ ಸತ್ಯ ಇಂದಿಗೂ ನಿಗೂಢವಾಗಿದೆ.

ಅವರದ್ದೇ ಕಥೆಯನ್ನು ಇಟ್ಟುಕೊಂಡು ನೀನಾಸಂ ಸತೀಶ್‌ ನಾಯಕತ್ವದಲ್ಲಿ ಈ ವಾರ ಚಂಬಲ್‌ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಕಥೆ ಮಾಡಲು ಒಂದಷ್ಟು ದಕ್ಷ ಅಧಿಕಾರಿಗಳು ಪ್ರೇರಣೆ ಎಂದು ನಿರ್ದೇಶಕ ಜೇಕಬ್‌ ಬಹಳಷ್ಟು ಬಾರಿ ಹೇಳಿದ್ದರು. ಆದರೆ ಈ ಕಥೆ ಮಾಡಲು ಡಿ ಕೆ ರವಿಯವರ ನಿಜ ಜೀವನ ಸ್ಪೂರ್ತಿ ಎಂಬುದು ಸಿನಿಮಾ ನೋಡಿದವರಿಗೆ ಗೊತ್ತಾಗುತ್ತದೆ.

.

ಸುಭಾಷ್ (ನಿನಾಸಂ ಸತೀಶ್) ಓರ್ವ ಪ್ರತಿಭಾನ್ವಿತ ಯುವಕ. ಹಣದ ಬಗ್ಗೆ ಯಾವುದೇ ವ್ಯಾಮೋಹವಿಲ್ಲ. ತಾನು ಮಾಡುವ ಕೆಲಸವನ್ನು ನಿಯತ್ತಿನಿಂದ ಮಾಡುವ ವ್ಯಕ್ತಿ. ಭ್ರಷ್ಟ ರಾಜಕಾರಣಿಗಳ ನಡುವೆ ಅವರಿಗೆಲ್ಲ ಸಿಂಹ ಸ್ವಪ್ನವಾಗಿ ಕೆಲಸ ಮಾಡುತ್ತಿರುತ್ತಾರೆ. ಕೋಲಾರದ ಮರಳು ಮಾಫಿಯಾ, ಅಲ್ಲಿನ ರಾಜಕಾರಣಿಗಳ ಅಟ್ಟಾಹಾಸಕ್ಕೆ ಬ್ರೇಕ್‌ ಹಾಕುವ ಸುಭಾಷ್‌ಗೆ ಆದಾಯ ಇಲಾಖೆಗೆ ವರ್ಗಾವಣೆಯಾಗುತ್ತದೆ. ಅಲ್ಲಿಯೂ ಅವರ ಖಡಕ್‌ ಕೆಲಸ ಯಶಸ್ವಿಯಾಗಿ ನಡೆಯುತ್ತದೆ. ಇಲ್ಲಿ ರಾಜಕಾರಣಿಗಳು, ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗುವ ಸುಭಾಷ್‌ಗೆ ಒಂದು ಶಾಕ್‌ ಎದುರಾಗುತ್ತದೆ ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.

.

ರವಿ ಅವರದ್ದು ಆತ್ಮ ಹತ್ಯೆ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಚಂಬಲ್‌ನಲ್ಲಿ ಬೇರೆಯದ್ದೇ ತಿರುವು ನೀಡಿದ್ದಾರೆ ನಿರ್ದೇಶಕ ಜೇಕಬ್‌.

ಕಥೆ ನೈಜ ಘಟನೆಗಳನ್ನು ಆಧರಿಸಿದ್ದೇ ಆದರೂ ಜೇಕಬ್‌ ವರ್ಗೀಸ್‌ ಗೆದ್ದಿರುವುದು ಬಿಗಿ ಹಿಡಿತದ ನಿರೂಪಣೆಯಲ್ಲಿ. ಇಂತಹ ಕಥೆಗಳಿಗೆ ಚಿತ್ರಕಥೆ ಬಹಳ ಮುಖ್ಯವಾಗುತ್ತದೆ. ಆ ವಿಚಾರದಲ್ಲಿ ಜೇಕಬ್‌ ಅವರ ಕೆಲಸ ಸೂಪರ್‌ ಆಗಿದೆ. ಇವರಿಗೆ ಸಾಥ್‌ ನೀಡಿರುವುದು ಕಲಾವಿದರು ಮತ್ತು ತಂತ್ರಜ್ಞರು. ಸಂಭಾಷಣೆಯೂ ಅಷ್ಟೇ ಎಲ್ಲಿಯೂ ಅತಿರೇಕ ಅನಿಸದೆ ಮೈಲ್ಡ್‌ ಆಗಿದೆ.

.

ಇನ್ನು ಅಯೋಗ್ಯ ನಂತರ ನೀನಾಸಂ ಸತೀಶ್‌ ಅವರ ಕರಿಯರ್‌ ಮೇಲ್ಮುಖವಾಗಿ ಏರುತ್ತಿದೆ ಎನ್ನುವುದಕ್ಕೆ ಚಂಬಲ್‌ ಸಾಕ್ಷಿಯಾಗಿದೆ.ಒಂದೇ ಒಂದು ಬಿಲ್ಡಪ್‌ ಇಲ್ಲದೇ ಹೋದರು ತಮ್ಮ ನೈಜ ನಟನೆಯಿಂದ ಸಿನಿಮಾಗೊಂದು ಮೆರುಗು ತಂದಿದ್ದಾರೆ ಸತೀಶ್‌. ಅಚ್ಯುತ್ ಕುಮಾರ್, ಸರ್ದಾರ್ ಸತ್ಯ, ಕಿಶೋರ್, ರೋಜರ್ ನಾರಾಯಣ್, ಸೋನುಗೌಡ ಸೇರಿದಂತೆ ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಸಂಗೀತ ನಿರ್ದೇಶಕರಾದ ಪೂರ್ಣಚಂದ್ರ ತೇಜಸ್ವಿ – ಜೂಡಾ ಸ್ಯಾಂಡಿ ಇಬ್ಬರೂ ಗಮನ ಸೆಳೆಯುತ್ತಾರೆ.

.

ಒಟ್ಟಿನಲ್ಲಿ ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಇದು ಮಸ್ಟ್‌ ವಾಚ್‌ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂತಹದ್ದು. ನೀವು ಒಮ್ಮೆ ಹೋಗಿ ನೋಡಿ ಬನ್ನಿ.

ರೇಟಿಂಗ್‌: 4/5


Leave a Reply