ಮಂಗಳೂರು ಭಾಷೆಯಲ್ಲಿ ನಕ್ಕು ನಗಿಸುವ ಡಿ ಕೆ ಬೋಸ್‌ – ಚಿತ್ರ ವಿಮರ್ಶೆ


 


ಚಿತ್ರ: ಡಿ ಕೆ ಬೋಸ್‌. 

ನಿರ್ದೇಶಕ: ಸಂದೀಪ್‌ ಮಹಾಂತೇಶ್‌. 

ನಿರ್ಮಾಣ:ನರಸಿಂಹ ಮೂರ್ತಿ. 

ತಾರಾಗಣ: ಪೃಥ್ವಿ, ರಘು ಪಾಂಡೇಶ್ವರ್‌, ರಿಷಾ,ಭೋಜರಾಜ್ ವಾಮೊಂಜೂರ್  ಮತ್ತಿತರರು.

 –

ಕರಾವಳಿ ಭಾಷೆಯಲ್ಲಿ ಸಿನಿಮಾ ಮಾಡಿದರೆ ಪಕ್ಕಾ ನಗಿಸಬಹುದು ಎಂದು ತಿಳಿದಿಕೊಂಡಿರುವ ಸಾಕಷ್ಟು ನಿರ್ದೇಶಕರು ಆ ಭಾಷೆಯನ್ನು ಬಳಸಿಕೊಂಡು ಒಂದಷ್ಟು ಸಂದೇಶಗಳನ್ನು ಜನರಿಗೆ ತಲುಪಿಸಲು ಪ್ರಯತ್ನ ಪಡುತ್ತಿದ್ದಾರೆ. ಅಂತಹ ಪ್ರಯತ್ನಗಳಲ್ಲಿ ಡಿ ಕೆ ಬೋಸ್‌ ಸಹ ಒಂದು.
.

ಹಿಂದೆ ಮುಂದೆ ಯಾರು ಇರದ ಇಬ್ಬರು ಹುಡುಗರು ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಇಂತಹವರ ಕೈಗೆ ವಜ್ರವೊಂದು ಸಿಗುತ್ತದೆ. ಅದನ್ನು ಮಾರಾಟ ಮಾಡಲು ಮಂಗಳೂರಿಗೆ ಬರುವ ಆ ಇಬ್ಬರು ಅಲ್ಲಿ ಪಡುವ ಪಾಡನ್ನು ತಮಾಷೆಯ ಮೂಲಕ ಹೇಳುವ ಕಥೆಯೇ ಡಿ ಕೆ ಬೋಸ್‌. ಈ ತಮಾಷೆಯ ಪ್ರಸಂಗಗಳ ನಡುವೆ ಒಂದು ಸೀರಿಯಸ್‌ ಆದ ಕಥೆ ಇದ್ದು ಅದೇನೆಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
.

ಗಂಭೀರ ಕಥೆಯನ್ನು ತಮಾಷೆಯ ಮೂಲಕ ಹೇಳಿದರೆ ಅದು ಜನರನ್ನು ಆದಷ್ಟು ಬೇಗ ರೀಚ್‌ ಆಗುತ್ತದೆ ಎಂಬ ಅಂಶವನ್ನು ನಿರ್ದೇಶಕರು ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿ ಕೊಂಚ ಹೆಚ್ಚಿನ ತಮಾಷೆಯನ್ನೇ ಅವರು ಚಿತ್ರಕಥೆಯಲ್ಲಿ ಸೇರಿಸಿದ್ಧಾರೆ. ನಿರ್ದೇಶಕರು, ಕಲಾವಿದರು ಎಲ್ಲರೂ ಹೊಸಬರಾದರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಳ್ಳೆ ತಂತ್ರಜ್ಞರಾಗುವ ಎಲ್ಲ ಲಕ್ಷಣಗಳು ನಿರ್ದೇಶಕ ಸಂದೀಪ್‌ ಮಹಾಂತೇಶ್‌ಗಿದೆ. ಸಿನಿಮಾದ ಕಥೆಗೆ ಇಷ್ಟೊಂದು ತಮಾಷೆಯ ಅಗತ್ಯ ಇರಲಿಲ್ಲ ಎನಿಸಿದರೂ ನಗಿಸುವುದರಲ್ಲಿ ಯಾವುದೇ ದೃಶ್ಯಗಳು ಹಿಂದೆ ಬೀಳುವುದಿಲ್ಲ.
.

ಸಿನಿಮಾದ ಮೇಕಿಂಗ್‌ ವಿಚಾರದಲ್ಲಿ ನಿರ್ದೇಶಕರು ಇನ್ನಷ್ಟು ಅಪ್ಡೇಟ್‌ ಆಗಬೇಕಿತ್ತು. ನಾಯಕ ಪೃಥ್ವಿ,ಭೋಜರಾಜ್ ವಾಮೊಂಜೂರ್ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಂಗೀತ ನಿರ್ದೇಶಕರು ಒಂದು ಹಾಡನ್ನು ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ಮೇಕಿಂಗ್‌ ಬಗ್ಗೆ ಇನ್ನೊಂದಿಷ್ಟು ಗಮನ ಹರಿಸಿದ್ದರೆ ಇನ್ನೂ ಒಳ್ಳೆ ಸಿನಿಮಾವಾಗುತ್ತಿತ್ತು. ಆದರೂ ಹೊಸಬರ ಪ್ರಯತ್ನವನ್ನು ಪ್ರೋತ್ಸಾಹಿಸಲು ಮತ್ತು ನಕ್ಕು ಮನಸ್ಸನ್ನು ಹಗುರಾಗಿಸಲು ಡಿ ಕೆ ಬೋಸ್‌ನನ್ನು ಒಮ್ಮೆ ನೋಡಬಹುದು.

ರೇಟಿಂಗ್ – 3/5


Digiqole ad

Nithyanand Amin

Leave a Reply