ಚಿತ್ರ : ಬಜಾರ್
ನಿರ್ಮಾಣ : ತಿಮ್ಮೇಗೌಡ
ನಿರ್ದೇಶಕ : ಸುನಿ
ಸಂಗೀತ : ರವಿ ಬಸ್ರೂರು
ಕ್ಯಾಮೆರಾ : ಸಂತೋಷ್ ರೈ ಪಾತಾಜೆ
ತಾರಾಗಣ : ಧನ್‌ವೀರ್, ಅದಿತಿ ಪ್ರಭುದೇವ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಚೇತನ್ ಚಂದ್ರ, ಧರ್ಮೇಂದ್ರ ಅರಸ್

.

ಪಾರಿವಾಳ ರೇಸ್‌ ಜಗತ್ತಿನ ಪರಿಚಯ ಮಾಡಿಸುವ ಬಜಾರ್‌ :

 

ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ತರಹದ ರೌಡಿಸಂ ಸಿನಿಮಾಗಳು ಬಂದಿವೆ. ಆದರೆ ಪಾರಿವಾಳ ರೇಸ್‌ಗೆ ಸಂಬಂಧಿಸಿದ್ದು ಇರಲಿಲ್ಲ. ಅದರ ಕೊರತೆಯನ್ನು ಬಜಾರ್‌ ನೀಗಿಸಿದೆ.

ಇಲ್ಲಿಯವರೆಗೂ ತರಾವರಿ ಲವ್‌ ಸ್ಟೋರಿಗಳ ಮೂಲಕ ಗಮನ ಸೆಳೆದಿದ್ದ ಸಿಂಪಲ್‌ ಸುನಿ ಮೊದಲ ಬಾರಿಗೆ ಇಂತಹದ್ದೊಂದು ವಿಶೇಷ ಕಥೆಯ ಮೂಲಕ ಮಾಸ್‌ ಸಿನಿಮಾ ಮಾಡಿದ್ದಾರೆ.

.

ನಿರ್ದೇಶಕ ಸುನಿ ತಮ್ಮ ಪಾರಿವಾಳ ಹಾರಾಟ ಸ್ಪರ್ಧೆ ಮತ್ತು ಅದರ ಹಿಂದಿನ ಬೆಟ್ಟಿಂಗ್ ದಂಧೆಯನ್ನು ತೆರೆ ಮೇಲೆ ತಂದು ಎಲ್ಲ ವರ್ಗದವರಿಗೂ ತಲುಪಿಸವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನಕ್ಕೆ ಅವರ ಚಿತ್ರಕಥೆ ಸಾಥ್‌ ನೀಡಿದೆ.

.

ಈ ಸಿನಿಮಾದಲ್ಲಿ ಕ್ಯೂಟ್‌ ಲವ್‌ಸ್ಟೋರಿಯಿದೆ, ಕ್ಲಾಸ್‌ ಜನಗಳ ಬದುಕಿದೆ. ಬಿ ಮತ್ತು ಸಿ ಆಡಿಯನ್ಸ್ ಇಷ್ಟಪಡುವ ಖಡಕ್‌ ಡೈಲಾಗ್‌, ಮಾಸ್‌ ಫೈಟ್ಸ್‌, ಕಿವಿಗೆ ಕಿಕ್‌ ಕೊಡುವ ಹಿನ್ನೆಲೆ ಸಂಗೀತ ಎಲ್ಲವೂ ಇದೆ. ಇವೆಲ್ಲವೂ ಇರುವ ಕಾರಣಕ್ಕೆ ಬಹುಶಃ ಸುನಿ ಇದಕ್ಕೆ ಬಜಾರ್‌ ಎಂದು ಹೆಸರಿಟ್ಟಿರಬಹುದು.

.

ಸುನಿ ಮೊದಲ ಬಾರಿಗೆ ರೌಡಿಸಂ ಎಲಿಮೆಂಟ್‌ ಇರುವ ಮಾಸ್‌ ಸಿನಿಮಾ ಮಾಡಿದ್ದಾರೆ, ಆದರೆ ತಮ್ಮ ಸ್ಟೈಲ್‌ನ್ನು ಇಲ್ಲಿಯೂ ಸೂಕ್ಷ್ಮವಾಗಿ ಮುಂದುವರೆಸಿದ್ದಾರೆ.ಚಿತ್ರದ ವೇಗ ಸ್ವಲ್ಪ ಚುರುಕಾಗಿರಬೇಕಿತ್ತು, ಚಿತ್ರದ ಸಬ್ಜೆಕ್ಟ್ ಹೆವಿ ಆಗಿರೋದ್ರಿಂದ ಪಾತ್ರವರ್ಗಕ್ಕೆ ನುರಿತ ಕಲಾವಿದರ ಅವಶ್ಯಕತೆ ಇತ್ತು. ಉದಾಹರಣೆಗೆ ಪೋಲೀಸ್ ಅಧಿಕಾರಿ ಪಾತ್ರಕ್ಕೆ ಮತ್ತಷ್ಟು ಖಡಕ್ ನಟನ ಅವಶ್ಯಕತೆಯಿತ್ತು. ಸಾಧು ಕೋಕಿಲ ಅವರದು ಕಾಮಿಡಿ ಪಾತ್ರವೋ, ಸೀರಿಯಸ್ ಪಾತ್ರವೋ ತಿಳಿಯುವುದಿಲ್ಲ. ಯಾಕಂದ್ರೆ ಚಿತ್ರ ಮುಗಿದ ಮೇಲೆ ಸಾಧು ಅವರ ನೆನಪಿರೋದೇ ಇಲ್ಲ.

.

ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಟ್ಟಿರುವ ಧನ್ವೀರ್‌ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ.ತಮ್ಮ ಹೈಟು ವೈಟು, ಧ್ವನಿ, ನಟನೆ ಎಲ್ಲದರಲ್ಲಿಯೂ ಅವರು ಇಷ್ಟವಾಗುತ್ತಾರೆ. ಶರತ್‌ ಲೋಹಿತಾಶ್ವ ಎಂದಿನಂತೆ ತಮ್ಮ ಪಾತ್ರದಲ್ಲಿ ಸಿಕ್ಸರ್‌ ಬಾರಿಸಿದ್ದಾರೆ. ನಾಯಕಿ ಅದಿತಿ ಸಹ ಕ್ಯೂಟ್‌ ಆಗಿ ನಟಿಸಿದ್ದಾರೆ. ಕುಡುಕ ತಂದೆಯಾಗಿ ಧರ್ಮೇಂದ್ರ ಅರಸ್ ಇಷ್ಟವಾಗುತ್ತಾರೆ. ಚೇತನ್ ಚಂದ್ರ, ಸಾಧು ಕೋಕಿಲಾ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

.

ಸಂಗೀತ ಮತ್ತು ಸಿನಿಮಾಟೋಗ್ರಫಿ ಸಿನಿಮಾದ ಪ್ಲಸ್‌ಪಾಯಿಂಟ್‌ನಲ್ಲಿ ತನ್ನ ಅಗ್ರಗಣ್ಯ ಸ್ಥಾನ ಗಳಿಸುತ್ತದೆ. ಇದಕ್ಕೆ ಕಾರಣರಾದ ರವಿ ಬಸ್ರೂರು, ಸಂತೋಷ್‌ ರೈ ಪಾತಾಜೆ ಅಭಿನಂದಾರ್ಹರು.

ಒಟ್ಟಿನಲ್ಲಿ ಸಿನಿಮಾ ಮಾಸ್‌ ಮತ್ತು ಕ್ಲಾಸ್‌ ಪ್ರೇಕ್ಷಕರಿಬ್ಬರನ್ನು ಸೆಳೆಯುವದರಲ್ಲಿ ಅನುಮಾನವಿಲ್ಲ.

.

ರೇಟಿಂಗ್ : 3.5/5


Leave a Reply