ನಟ ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಸಿನಿಮಾ ಶುರು ಆದಾಗಿನಿಂದ, ಆ ಚಿತ್ರದ ಬಿಡುಗಡೆಯವರೆಗೂ ಚಿತ್ರರಂಗದ ಎಲ್ಲ ನಟರು ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ‘ಅಮರ್’ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ವಿಡಿಯೋ ಮೂಲಕ ಶುಭ ಹಾರೈಸಿರುವ ಅವರು ”ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯದಲ್ಲಿ ಹೇಗೆ ವಿಜೃಂಭಿಸಿದನೋ ಅದೇ ರೀತಿ ಅಭಿಷೇಕ್ ಸಹ ಕನ್ನಡ ಚಿತ್ರರಂಗದಲ್ಲಿ, ಕನ್ನಡ ಜನಗಳ ಹೃದಯಲ್ಲಿಯೂ ವಿಜೃಂಭಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.” ಎಂದು ಹೇಳಿದ್ದಾರೆ.

ಅಂಬರೀಶ್ ಮತ್ತು ರಜನಿಕಾಂತ್ ಒಳ್ಳೆಯ ಗೆಳೆಯರು. ಯಾವುದೇ ಪಾತ್ರ ಇದ್ದರೂ ‘ಅಮರ್’ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ರಜನಿಕಾಂತ್ ಹೇಳಿದ್ದರಂತೆ. ಆದರೆ, ಚಿತ್ರತಂಡ ಅವರ ಒಳ್ಳೆತನವನ್ನು ಬಳಸಿಕೊಳ್ಳುವುದು ಬೇಡ ಎಂದು ನಿರ್ಧಾರ ಮಾಡಿತಂತೆ.

ಅಂದಹಾಗೆ, ‘ಅಮರ್’ ಸಿನಿಮಾ ಇದೇ ಶುಕ್ರವಾರ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ನಾಗಶೇಖರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂದೇಶ್ ನಾಗರಾಜ್ ಬಂಡವಾಳ ಹಾಕಿದ್ದಾರೆ.

ಬೈಕ್ ರೇಸರ್ ಪಾತ್ರದಲ್ಲಿ ಅಭಿಷೇಕ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯ ಹೂಪ್ ಚಿತ್ರದ ನಾಯಕಿ. ನಟ ದರ್ಶನ್ ಹಾಗೂ ರಚಿತಾ ರಾಮ್ ಚಿತ್ರದ ವಿಶೇಷ ಹಾಡಿನಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದು, ಹಾಡುಗಳು ಹಿಟ್ ಆಗಿವೆ.


Leave a Reply