‘ಅಧ್ಯಕ್ಷ’ನಾಗಿ ಆಳ್ವಿಕೆ ಮಾಡಲು ಮತ್ತೆ ಬರ್ತಿದ್ದಾರೆ ಶರಣ್

 ‘ಅಧ್ಯಕ್ಷ’ನಾಗಿ ಆಳ್ವಿಕೆ ಮಾಡಲು ಮತ್ತೆ ಬರ್ತಿದ್ದಾರೆ ಶರಣ್

ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಮತ್ತೆ ‘ಅಧ್ಯಕ್ಷ’ನಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 2014ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ‘ಅಧ್ಯಕ್ಷ’ ಸಿನಿಮಾ ಶರಣ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸಿದ್ದ ‘ಅಧ್ಯಕ್ಷ’ ಚಿತ್ರದ ನಂತರ ಶರಣ್ ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಈಗ ಮತ್ತದೆ ಹೆಸರಿನ ಚಿತ್ರದ ಮೂಲಕ ಶರಣ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ಸದ್ಯ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ‘ರ್ಯಾಂಬೊ-2’, ‘ವಿಕ್ಟರಿ-2’ ಸಿನಿಮಾಗಳ ಗೆಲುವಿನ ಸಕ್ಸಸ್ ನಲ್ಲಿರುವ ಶರಣ್ ಈಗ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ.


ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ಯೋಗಾನಂದ್ ಮುದ್ದಣ್ಣ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಅಂದ್ಹಾಗೆ ಈ ಚಿತ್ರಕ್ಕೂ ‘ಅಧ್ಯಕ್ಷ’ ಚಿತ್ರಕ್ಕೂ ಯಾವುದೆ ಸಂಬಂಧ ಇಲ್ಲವಂತೆ. ಬಹುತೇಕ ಚಿತ್ರೀಕರಣ ಅಮೆರಿಕದಲ್ಲೆ ಮಾಡಲಾಗಿದೆಯಂತೆ. ವಿಶೇಷ ಅಂದ್ರೆ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಾಗಿಣಿ ಶರಣ್ ಜೊತೆ ತೆರೆಹಂಚಿಕೊಂಡಿದ್ದಾರೆ.

ಚಿತ್ರದ ಮತ್ತೊಂದು ವಿಶೇಷ ಅಂದ್ರೆ ವಿ ಹರಿಕೃಷ್ಣ ಸಂಗೀತ. ಮೊದಲ ಬಾರಿಗೆ ಹರಿಕೃಷ್ಣ ಶರಣ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮೂರು ಹಾಡುಗಳನ್ನು ಅಮೆರಿಕದಲ್ಲಿ ಸೆರೆಹಿಡಿಯಲಾಗಿದೆಯಂತೆ. ಇನ್ನು ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲಾ, ರಂಗಾಯಣ ರಘು, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ದೊಡ್ಡ ಹಾಸ್ಯ ಕಲಾವಿದರ ಬಳಗವೆ ಇದೆ. ಶರಣ್ ಸದ್ಯ ಸಿಂಪಲ್ ಸುನಿ ಸಾರಥ್ಯದ ‘ಅವತಾರ್ ಪುರುಷ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ-2’ ಚಿತ್ರದಲ್ಲೂ ಶರಣ್ ಅಭಿನಯಿಸಲಿದ್ದಾರೆ. ಭಟ್ರು ಮುಂಗಾರಿಗಾಗಿ ಕಾಯುತ್ತಿರುವ ಕಾರಣ ‘ಗಾಳಿಪಟ-2 ‘ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಸದ್ಯ ‘ಅಧ್ಯಕ್ಷ ಇನ್ ಅಮೆರಿಕ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಶರಣ್ ಜುಲೈನಲ್ಲಿ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ ಭರಪೂರ ಮನರಂಜನೆ ಇರಲಿದ್ದು ಶರಣ್ ಕಾಮಿಡಿ ಮೂಲಕ ಚಿತ್ರಪ್ರೇಕ್ಷಕರು ಮತ್ತೊಮ್ಮೆ ನಗೆಗಡಲಲ್ಲಿ ತೇಲಲಿದ್ದಾರೆ.


Digiqole ad

Nithyanand Amin

Leave a Reply