ಕನ್ನಡ ಚಿತ್ರರಂಗವನ್ನು ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿದ್ದ ‘ಕೆಜಿಎಪ್’ ಚಿತ್ರದ ಚಾಪ್ಟರ್-2ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ‘ಕೆಜಿಎಫ್-2’ ಚಿತ್ರೀಕರಣ ಪ್ರಾರಂಭವಾಗಿದ್ದು ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮೇ ತಿಂಗಳ ಪ್ರಾರಂಭದಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದರು. ಆದ್ರೆ ಚಿತ್ರದ ನಾಯಕ ರಾಕಿ ಭಾಯ್ ಮಾತ್ರ ಇನ್ನು ಎಂಟ್ರಿ ಕೊಟ್ಟಿರಲಿಲ್ಲ. ಆದ್ರೀಗ ಯಶ್ ಎಂಟ್ರಿಗೆ ದಿನಾಂಕ ನಿಗಧಿಯಾಗಿದೆ. ಹೌದು, ಮುಂದಿನ ತಿಂಗಳು ಜೂನ್ 6ಕ್ಕೆ ಯಶ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

‘ಕೆಜಿಎಫ್ ಚಾಪ್ಟರ್-2’ ಚಿತ್ರೀಕರಣ ಮುಂದಿನ ತಿಂಗಳು ಜೂನ್ ಇಂದ ಮೈಸೂರಿನಲ್ಲಿ ಶುರುವಾಗಲಿದೆಯಂತೆ. ಮೈಸೂರಿನಿಂದ ಚಾಪ್ಟರ್-2 ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಚಾಪ್ಟರ್-2 ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ಇರಲಿದೆಯಂತೆ.

ಇಷ್ಟುದಿನಗಳು ಚುನಾವಣಾ ಪ್ರಚಾರ ಮತ್ತ ಇತರ ಕೆಲಸಗಳಲ್ಲಿ ಬ್ಯುಸಿ ಇದ್ದ ರಾಕಿ ಭಾಯ್ ಈಗ ಕೆಜಿಎಫ್ ನತ್ತ ಗಮನ ಹರಿಸಿದ್ದಾರೆ. ಸದ್ಯ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಯಶ್ ಗಮನ ಇನ್ನ ಸಂಪೂರ್ಣ ‘ಕೆಜಿಎಫ್-2’ ಮೇಲೆ ಇರಲಿದೆಯಂತೆ. ‘ಕೆಜಿಎಫ್’ ಮೊದಲ ಭಾಗ ಕಳೆದ ವರ್ಷ ಡಿಸೆಂಬರ್ ನಲ್ಲೆ ರಿಲೀಸ್ ಆಗಿತ್ತು. ಸ್ಯಾಂಡಲ್ ವುಡ್ ಮಾತ್ರವಲ್ಲದೆ ದೇಶವಿದೇಶದಲ್ಲೂ ಸಖತ್ ಸದ್ದು ಮಾಡಿತ್ತು. ಹಾಗಾಗಿ ಚಾಪ್ಟರ್-2 ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅಲ್ಲದೆ ‘ಕೆಜಿಎಫ್-2’ನಲ್ಲಿ ಬಾಲಿವುಡ್ ನ ಖ್ಯಾತ ನಟರು ಇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದ್ರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ. ಇವರ ಪಾತ್ರಗಳು ಹೇಗಿರಲಿದೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿದೆ.


Leave a Reply