ಕಳೆದ ಲೋಕಸಭೆ ಚುನಾವಣೆ ವೇಳೆ ಭಾರೀ ಸದ್ದು ಮಾಡಿದ್ದ ಬಿಜೆಪಿಯ ಚೌಕಿದಾರ್ ಹೆಸರಿನಲ್ಲಿ ಕನ್ನಡ ಸಿನಿಮಾ ಮೂಡಿ ಬರುತ್ತಿದೆ. ರಥಾವರ’ ಹಾಗೂ ‘ತಾರಕಾಸುರ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರು ಚೌಕಿದಾರ್ ನಿರ್ದೇಶಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


ಈ ಮೊದಲು ಗಣೇಶ್ ಅಭಿನಯದಲ್ಲಿ ಮೂಡಿಬಂದಿದ್ದ ‘ಚೆಲುವಿನ ಚಿತ್ತಾರ’ ಹಾಗೂ ‘ಶೈಲೂ’ ಚಿತ್ರದಲ್ಲಿ ನಿರ್ದೇಶ ಚಂದ್ರಶೇಖರ್ ಬಂಡಿಯಪ್ಪ ಕೆಲಸ ಮಾಡಿದ್ದರಂತೆ. ಹೀಗಾಗಿ ಗಣೇಶ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ವಿಭಿನ್ನವಾದ ಕಥೆ ಹೆಣೆದಿದ್ದಾರಂತೆ.


ಚಂದ್ರಶೇಖರ್ ಅವರ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಅವರಲ್ಲಿ ನಟನೆಗೆ ಸಂಬಂಧಿಸಿದಂತೆ ಬಹಳಷ್ಟು ಪ್ಲಸ್ ಪಾಯಿಂಟ್‌ಗಳು ಇವೆಯಂತೆ. ಅವರನ್ನು ಯಾವುದೇ ರೀತಿಯಲ್ಲೂ ಪ್ರೇಕ್ಷಕರು ಒಪ್ಪಿಕೊಳ್ಳುವಂತೆ ತೋರಿಸಬಹುದು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅವರ ಅಭಿಪ್ರಾಯ ಎನ್ನಲಾಗಿದೆ. ಹೀಗಾಗಿ ಚೌಕಿದಾರ್ ಚಿತ್ರದಲ್ಲಿ ನಟ ಗಣೇಶ್ ಅವರನ್ನು ಎರಡು ರೀತಿಯ ಶೇಡ್‌ಗಳಲ್ಲಿ ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಅದರಲ್ಲೊಂದು ಪಾತ್ರ 55 ವರ್ಷದ ಅಂಕಲ್ ಪಾತ್ರ. ಈ ಪಾತ್ರದಲ್ಲಿ ಸಹ ನಟ ಗಣೇಶ್ ಅವರು ಮನಮುಟ್ಟುವಂತೆ ನಟಿಸಬಲ್ಲರು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅಭಿಪ್ರಾಯವಾಗಿದೆ.


ಸಿನಿಮಾ ಟೈಟಲ್ ಗೂ ಚಿತ್ರ ಕಥೆಗೂ ಯಾವುದೇ ರಾಜಕೀಯ ನಂಟಿಲ್ಲ, ಇದೊಂದು ಸಾಂಸಾರಿಕ ಸಿನಿಮಾ ಕಥೆಯಾಗಿದೆ ಎಂದು ಚಂದ್ರಶೇಖರ್ ಸ್ಪಷ್ಟ ಪಡಿಸಿದ್ದಾರೆ. ಗೀತಾ ಹಾಗೂ ವೆರ್ ಈಸ್ ಮೈ ಕನ್ನಡಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ನಟ ಗಣೇಶ್. ಹೀಗಾಗಿ ಮುಂಬರುವ ಈ ಚೌಕಿದಾರ್ ಚಿತ್ರವು ಆಗಸ್ಟ್‌ನಲ್ಲಿ ಮುಹೂರ್ತ  ನಡೆಯಲಿದೆ.  


Leave a Reply