ಬೆಂಗಳೂರು: ಆನೆ ನಡೆದದ್ದೇ ದಾರಿ, ಒಂಟಿ ಸಲಗ ಎಂದಿಗೂ ಅಪಾಯಕಾರಿ, ಆನೆಗಳು ಗುಂಪಿನಲ್ಲಿದ್ದಾಗ ಏನೂ ಮಾಡಲ್ಲ, ಆದರೆ ಒಂಟಿ ಸಲಗ ಮಾತ್ರ ಯಾವತ್ತಿದ್ರೂ ಡೇಂಜರ್ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದುನಿಯಾ ವಿಜಯ್ ಅಭಿನಯದ ಹೊಸ ಚಿತ್ರ “ಸಲಗ” ಮಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು.

ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿದ್ದರಾಮಯ್ಯ, “ಇದು ಒಂಟಿ ಸಲಗಾನಾ ಅಥವಾ ಹಿಂಡಿನಲ್ಲಿರುತ್ತಾ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು. ಆನೆ ನಡೆದಿದ್ದೇ ದಾರಿಯಾದರೂ, ಒಂಟಿ ಸಲಗ ಭಯ ಮತ್ತು ಆತಂಕದಲ್ಲಿರುವ ಕಾರಣ ತುಂಬಾ ಅಪಾಯಕಾರಿ. ತನ್ನ ರಕ್ಷಣೆಗಾಗಿ ಎದುರಿನವರ ಮೇಲೆರಗುತ್ತದೆ” ಎಂದು ಹೇಳಿದ್ದಾರೆ

ಅವರ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮದೇ ಪಕ್ಷದ ಕೆಲ ನಾಯಕರು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸೋಲಿಗೂ ಅವರ ಅಹಂ ಮೂಲ ಕಾರಣ ಎನ್ನುತ್ತಿದ್ದಾರೆ. ಅವರೆಲ್ಲರ ಮಧ್ಯೆ ಸಿದ್ದರಾಮಯ್ಯಗೆ ಒಂಟಿ ಎಂಬ ಭಾವನೆ ಮೂಡಿದೆಯೇ? ಒಂಟಿ ಸಲಗ ರೊಚ್ಚಿಗೆದ್ದರೆ ಯಾರನ್ನೂ ಬಿಡೋದಿಲ್ಲ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆಯೇ? ಎಂಬ ಗುಸುಗುಸು ಕೇಳಿಬಂದಿದೆ.

ದುನಿಯಾ ವಿಜಯ್ ನಟನಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಈಗ ಸಲಗ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಚಿತ್ರದ ಕಥೆ ನನಗೆ ಗೊತ್ತಿಲ್ಲ, ತೆರೆ ಮೇಲೆ ನೋಡುತ್ತೇನೆ


ಸಿನಿಮಾಗಳು ಉತ್ತಮ ಸಂದೇಶ ಕೊಡುವಂತಿರಬೇಕು. ಜತೆಗೆ ಮನೋರಂಜನೆಯೂ ಇರಬೇಕು. ಸಾಮಾಜಿಕ ಮೌಲ್ಯಗಳನ್ನು ತಿಳಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು


“ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಮೌಲ್ಯಯುತ ಸಂದೇಶಗಳು ಕಡಿಮೆ ಆಗುತ್ತಿದೆ” ಎಂದು ಹೇಳಿದ ಮಾಜಿ ಸಿಎಂ “ಶಾಲೆಗೆ ಹೋಗಬೇಕಾದ್ರೆ ಪ್ರತಿದಿನವೂ ಸಿನಿಮಾ ನೋಡುತ್ತಿದ್ದೆ. ಈಗ ಎರಡು ವರ್ಷಕ್ಕೊಂದು ಸಿನಿಮಾ ನೋಡುವೆ” ಎಂದು ನೆನಪಿಸಿಕೊಂಡಿದ್ದಾರೆ.

ಸಲಗ” ಚಿತ್ರ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು ಶ್ರೀಕಾಂತ್‍ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವೆಂದರೆ ಶಿವಣ್ಣನ ಮೈಲಾರಿ ಹಾಗೂ ಟಗರು ನಂತರ ವಿಜಯ್ ಅಭಿನಯದ ಸಲಗ ಚಿತ್ರಕ್ಕೆ ಸಿದ್ದರಾಮಯ್ಯ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.

‘ಸಲಗ’ ಚಿತ್ರದಲ್ಲಿ ದುನಿಯಾ ವಿಜಿ ಜೊತೆಗೆ ಧನಂಜಯ್ ಮೊದಲಾದ ಕಲಾವಿದರು ನಟಿಸಲಿದ್ದಾರೆ.


Leave a Reply