ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಸ್ ಗಳಲ್ಲಿ ಹೆಸರು ಮಾಡುತ್ತಿರುವ ಕನ್ನಡದ “ಗಂಟು ಮೂಟೆ”

 ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಸ್ ಗಳಲ್ಲಿ ಹೆಸರು ಮಾಡುತ್ತಿರುವ ಕನ್ನಡದ “ಗಂಟು ಮೂಟೆ”

ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ ನಲ್ಲಿ ‘ಬೆಸ್ಟ್ ಸ್ಕ್ರೀನ್ ಪ್ಲೇ’ ಗೆದ್ದು, ಕೆನಡಾ ಫಿಲಂ ಅವಾರ್ಡ್ಸ್ ನಲ್ಲಿ ಪ್ರದರ್ಶನ ಗೊಂಡು, ಪ್ರಸಿದ್ಧ ನಟಿ ಸೀಮಾ ಬಿಸ್ವಾಸ್ ಹಾಗು ಆದಿಲ್ ಹುಸೈನ್ ಮುಂತಾದವರಿಂದ ಪ್ರಶಂಸೆ ಗಳಿಸಿದ ‘ಗಂಟುಮೂಟೆ’ ಕನ್ನಡ ಚಲನಚಿತ್ರ ಈಗ ಆಸ್ಟ್ರೇಲಿಯಾದತ್ತ ಪ್ರಯಾಣಿಸಿದೆ. ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ನಲ್ಲಿ, ಆಸ್ಟ್ರೇಲಿಯನ್ ಪ್ರೀಮಿಯರ್ ಗೆ ಆಯ್ಕೆ ಗೊಂಡ ಈ ವರ್ಷದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 


ಹಾಗೆಯೇ ಇಟಲಿಯ ರೋಮ್ ನಲ್ಲಿ ನಡೆಯುವ ಸೋಶಿಯಲ್ ವರ್ಲ್ಡ್ ಫಿಲಂ ಫೆಸ್ಟಿವಲ್ ನಲ್ಲಿ  ಯಂಗ್ ಇಂಡೆಪೆಂಡಂಟ್ ಸಿನಿಮಾ ಆ ದಿ ವರ್ಲ್ಡ್ ವಿಭಾಗದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ. 

ಪ್ರಪಂಚದ ಸುತ್ತಲೂ ಸದ್ದು ಮಾಡಿ ಕನ್ನಡ ಚಲನಚಿತ್ರಗಳ ಬಗೆಗೆ ಅಂತರಾಷ್ಟ್ರೀಯರ ಗಮನ ಸೆಳೆಯುವಂತೆ ಮಾಡುತ್ತಿರುವ ‘ಗಂಟುಮೂಟೆ’ ಸಧ್ಯದಲ್ಲೇ ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ಅಮೇಯುಕ್ತಿ ಸ್ಟುಡಿಯೊಸ್ ನಿರ್ಮಿಸಿರುವ ‘ಗಂಟುಮೂಟೆ’ ಯಾ ನಿರ್ದೇಶಕಿ ರೂಪ ರಾವ್. ಮುಖ್ಯ ತಾರಾಗಣದಲ್ಲಿ ತೇಜು ಬೆಳವಾಡಿ ಹಾಗು ನಿಶ್ಚಿತ್ ಕೊರೋಡಿ ಇದ್ದಾರೆ. 

೯೦ ರ ದಶಕದಲ್ಲಿ, ‘ಸಿನಿಮಾ’ದ ಹಾಗೆ ‘ಜೀವನ’ ಇರತ್ತೆ ಅಂತ ಭ್ರಮಿಸೋ  ೧೬/೧೭ ರ ಹರೆಯದ ಹುಡುಗಿ ‘ಮೀರಾ’ ಳ  ನಿಜ ಪ್ರಪಂಚದೆಡೆಗೆ ಪ್ರಯಾಣ  ‘ಗಂಟುಮೂಟೆ’ ಯ ಕಥಾ ಹಂದರ. 

ಹುಡುಗಿಯ ದೃಷ್ಟಿ ಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗು ಅಷ್ಟೇ ತೀವ್ರತೆಯಿಂದ ಕೂಡಿದ ಭಾವನಾ ತುಡಿತಗಳ ಸಮ್ಮಿಲನ. ಕನ್ನಡದ ಮಟ್ಟಿಗೆ  ಈ ರೀತಿಯ ಪ್ರಯತ್ನ ಅತಿ ವಿರಳ. ವಿದ್ಯಾಭ್ಯಾಸದ ಒತ್ತಡ, ಶಾಲೆಯಲ್ಲಿ, ಶಾಲೆಯ ಹೊರಗೆ ಹಿಂಸಿಸೋ ರಗಳೆಗಳು, ಮಾರ್ಕ್ಸ್ ಗಾಗಿ ನಡೆಯೋ ಸ್ಪರ್ಧೆ, ತರಲೆ, ಹುಡುಗಿಯರಿಗಾಗಿ ನಡೆಯೋ ಗಲಾಟೆ – ಇವುಗಳ ನಡುವೆ ಕಾಡೋ ಮೊದಲ ಉತ್ಕಟ ಪ್ರೇಮ, ಇವೆಲ್ಲೆದರ ಮಧ್ಯೆ ಅರಳಿರುವುದೇ ‘ಗಂಟುಮೂಟೆ’. 

ಇತ್ತೀಚಿಗೆ ಈ ಸಿನಿಮಾದ ಕುತೂಹಲ ಭರಿತ ಎರಡು ಟೀಸರ್ ಬಿಡುಗಡೆ ಆಗಿ, ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ. 


Digiqole ad

Sunil H C

Leave a Reply