ಅಮ್ಮ ಮಗಳ ಸಾಹಸದ ಕಥೆ

ಚಿತ್ರ: ಮಹಿರಾ

ನಿರ್ದೇಶಕ: ಮಹೇಶ್‌ ಗೌಡ

ನಿರ್ಮಾಪಕ: ವಿವೇಕ್‌ ಕೋಡಪ್ಪ

ತಾರಾಗಣ: ವರ್ಜಿನಿಯಾ, ಚೈತ್ರಾ, ರಾಜ್‌ ಬಿ ಶೆಟ್ಟಿ

ಹೆಣ್ಣಿನ ಶಕ್ತಿಯನ್ನು ಹೇಳಲು ಮಹಿರಾ ಎನ್ನುತ್ತಾರೆ. ಈ ವಾರ ಬಿಡುಗಡೆಯಾಗಿರುವ ಮಹಿರಾ ಸಿನಿಮಾದಲ್ಲಿಯೂ ಹೆಣ್ಣಿನ ಶಕ್ತಿಯೇ ಮುಖ್ಯ ಅಂಶ. ತಾಯಿ ಮಗಳ ಬದುಕು ಮತ್ತು ಹೋರಾಟವನ್ನು ಇಟ್ಟುಕೊಂಡು ಸಿನಿಮಾ ಮಾಡಿರುವ ಮಹೇಶ್‌ಗೌಡ ಒಂಚೂರು ನಿರೀಕ್ಷೆ ಹುಟ್ಟಿಸುತ್ತಾರಾದರೂ ಅಲ್ಲಲ್ಲಿ ನಿರಾಸೆ ಮೂಡಿಸುತ್ತಾರೆ.

ಆದರೆ ಕ್ಲೈಮ್ಯಾಕ್ಸ್‌ ತನಕ ಸಸ್ಪೆನ್ಸ್‌ ಉಳಿಸಿಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಾಯಿ ಮಗಳ ಹೋರಾಟ ಎಂದಾಕ್ಷಣ ಅದನ್ನು ಕರುಣಾಜನಕ ಕಥೆ ಎನ್ನಬಹುದು ಆದರೆ ಆ ಕರುಣಾಜನಕ ಕಥೆಯೊಳಗೆ ಅಮ್ಮ ಮಗಳ ರೆಬಲ್‌ ಕಥೆಯಿದೆ ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.

ಕಾಲೇಜಿನಲ್ಲಿ ಹುಡುಗರಂತೆ ರಫ್ ಅಂಡ್ ಟಫ್ ಆಗಿ ಹೊಡೆದಾಡುವ ಮಗಳು ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗುತ್ತಾಳೆ. ಅವಳ ‘ಸಂದರ್ಶನ’ ತೆಗೆದುಕೊಳ್ಳಲು ಕಾಲೇಜಿಗೆ ಬರುವ ಪ್ರೈವೇಟ್ ಏಜೆನ್ಸಿ ಹುಡುಗಿಯೊಬ್ಬಳ ಮೂಲಕ ಚಿತ್ರಕಥೆ ಊಹಿಸಲಸಾಧ್ಯವಾದ ಬೆರೆಯದೇ ತಿರುವು ಪಡೆದುಕೊಳ್ಳುತ್ತದೆ. ಈ ಭಾಗದಲ್ಲಿ ಸಿಕ್ಕಾಪಟ್ಟೆ ಥ್ರಿಲ್ಲಿಂಗ್‌ ಇದ್ದು, ಪ್ರೇಕ್ಷಕರು ಪ್ರತಿ ದೃಶ್ಯದಲ್ಲಿಯೂ ಸೀಟಿನ ತುದಿಗೆ ಕೂರುವಂತೆ ಮಾಡುತ್ತಾರೆ ನಿರ್ದೇಶಕರು. ಆದರೆ ಹಾಡಿನ ವಿಷಯದಲ್ಲಿ ಕೊಂಚ ಬೇಸರ ಮೂಡಿಸುತ್ತಾರೆ. ಅವುಗಳನ್ನು ಸುಖಾ ಸುಮ್ಮನೆ ತುರುಕಿದಂತೆ ಕಾಣುತ್ತದೆ.

ಮೂರ್ನಾಲ್ಕು ವಿಷಯಗಳನ್ನು ಒಮ್ಮೇಲೆ ಹೇಳಲು ನಿರ್ದೇಶಕರು ಹಾತೊರೆದಿರುವುದರಿಂದ ಅದು ಕೊಂಚ ಎಳೆದಂತೆ ಅನಿಸುತ್ತದೆ. ಯಾವುದೇ ವಿಷಯ ತಲೆಯಲ್ಲಿ ಕೂರುವುದಿಲ್ಲ.

ತಾಯಿ ಪಾತ್ರದಲ್ಲಿ ವರ್ಜೀನಿಯ ರಾಡ್ರಿಗಸ್ ಹಾಗೂ ಮಗಳ ಪಾತ್ರದಲ್ಲಿ ಚೈತ್ರಾ ಆಚಾರ್ ಇಬ್ಬರು ನಿರ್ದೇಶಕರ ಕನಸಿಗೆ ಜೀವ ತುಂಬಿ ನಟಿಸಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಮೊದಲ ಬಾರಿಗೆ ‘ಅಂಡರ್ ಕವರ್ ಏಜೆಂಟ್ ಆಗಿ ಸೀರಿಯಸ್‌ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ. ಬಾಲಾಜಿ ಮನೋಹರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಸಹ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.

ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಸಿನಿಮಾಟೋಗ್ರಫಿ ಸಹ ಉತ್ತಮವಾಗಿ ಮೂಡಿಬಂದಿದೆ. ಒಂದಷ್ಟ ಸಣ್ಣ ಪುಟ್ಟ ತಪ್ಪುಗಳಿದ್ದರೂ ಒಮ್ಮೆ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ.

ರೇಟಿಂಗ್ – 3.25/5


Leave a Reply