ಇಷ್ಟು ದಿನ ಕಾಮಿಡಿ ಮಾಡುತ್ತಿದ್ದ ಕೋಮಲ್‌, ಒಮ್ಮಲೆ ತೆರೆ ಮೇಲೆ ಸೀರಿಯಸ್‌ ಆಗಿ ಪೊಲೀಸ್ ಆಫೀಸರ್‌ ಆಗಿ ಬಂದರೆ ಹೇಗಿರುತ್ತದೆ ಎನ್ನುವವರಿಗೆ ಕೋಮಲ್‌ ಭರ್ಜರಿಯಾಗಿಯೇ ಉತ್ತರ ನೀಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕೆಂಪೇಗೌಡ -2 ಸಿನಿಮಾದಲ್ಲಿ ಕಾಮಿಡಿ ಕೋಮಲ್‌ ಆ್ಯಕ್ಷನ್‌ ಹೀರೋ ಆಗಿದ್ದಾರೆ.

ಪ್ರಸಕ್ತ ರಾಜಕೀಯ ಸನ್ನಿವೇಶ, ಪೊಲೀಸ್‌ ವ್ಯವಸ್ಥೆ , ಕರ್ನಾಟಕದ ಇತಿಹಾಸದಲ್ಲಿ ಸೇರಿ ಹೋಗಿರುವ ದೊಡ್ಡ ರಾಜಕೀಯ ನಾಯಕರ ಮನೆಯೊಳಗೆ ನಡೆದ ಕಥೆಗಳು ಇವೆಲ್ಲವನ್ನು ಇಟ್ಟುಕೊಂಡು ಕೋಮಲ್‌ ಒಂದೊಳ್ಳೆ ಮಾಸ್‌ ಸಿನಿಮಾ ಮಾಡಿದ್ದಾರೆ.

ಒಬ್ಬ ಸರ್ಕಲ್‌ ಇನ್‌ಸ್ಪೆಕ್ಟರ್‌ ತನ್ನ ಅಧಿಕಾರವಾಧಿಯಲ್ಲಿ ಎಷ್ಟು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬಹುದು ಮತ್ತು ರಾಜಕೀಯದಲ್ಲಿ ಪ್ರಜಾಪ್ರಭುತ್ವವೇ ಅಂತಿಮ ಎಂಬುದನ್ನು ಚರ್ಚೆ ಮಾಡುವಂತಹ ಸಿನಿಮಾವಾಗಿ ಕೆಂಪೇಗೌಡ ನಿಲ್ಲುತ್ತದೆ.

ಕೆಂಪೇಗೌಡ (ಕೋಮಲ್‌) ಒಬ್ಬ ಸರ್ಕಲ್‌ ಇನ್‌ಸ್ಪೆಕ್ಟರ್‌. ದೂರದ ಬೆಳಗಾವಿಯಿಂದ ಬೆಂಗಳೂರಿನ ಶಿವಾಜಿನಗರದ ಪೊಲೀಸ್‌ ಠಾಣೆಗೆ ವರ್ಗವಾಗಿ ಬಂದಾಗ ಆತನನ್ನು ಒಂದು ಬಲವಾದ ಕೇಸ್‌ ಎದುರುಗೊಳ್ಳುತ್ತದೆ. ಮುಚ್ಚಿ ಹೋಗಿದ್ದ ಕೊಲೆ ಪ್ರಕರಣವದು. ಅದನ್ನು ಮತ್ತೆ ಓಪನ್‌ ಮಾಡುವ ಕೆಂಪೇಗೌಡ ಅದರ ತನಿಖೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದೇ ಚಿತ್ರಕಥೆ.

ಕಥೆ ವಿಚಾರದಲ್ಲಿ ಕೆಂಪೇಗೌಡ-2 ಬಹಳ ಟ್ರಿಕ್ಕಿಯಾಗಿದೆ. ಹಾಗಾಗಿ ಅಲ್ಲಲ್ಲಿ ಕೊಂಚ ಲಿಂಕ್‌ ಮಿಸ್‌ ಆದಂತೆ ಅನ್ನಿಸುತ್ತದೆ. ಆದರೆ ಅದನ್ನೆಲ್ಲ ಕೋಮಲ್‌ ತಮ್ಮ ಅದ್ಭುತ ನಟನೆಯ ಮೂಲಕ ಬ್ಯಾಲೆನ್ಸ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ವರುಣ್‌ ಉನ್ನಿ ಹಿನ್ನೆಲೆ ಸಂಗೀತದಿಂದ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ.

ಕೋಮಲ್‌ ಮೇಲೆ ಹೇಳಿದಂತೆ ತಮ್ಮ ಕಾಮಿಡಿ ಇಮೇಜ್‌ನ್ನು ಒಮ್ಮೆಲೆ ಕಿತ್ತು ಹಾಕಿ ಪರ್ಫೆಕ್ಟ್ ಮಾಸ್ ಹೀರೋ ಆಗಿ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ನಿರ್ದೇಶಕರು ಒಂದೇ ಒಂದು ಹಾಸ್ಯ ದೃಶ್ಯವನ್ನು ಕೋಮಲ್‌ಗಾಗಿ ಚಿತ್ರೀಕರಿಸಿಲ್ಲ. ನಾಯಕಿ ರಕ್ಷಿಕಾ ಶರ್ಮಗೆ ಹಾಗೆ ಬಂದು ಹೀಗೆ ಹೋಗುತ್ತಾರೆ. ಶ್ರೀಶಾಂತ್‌ ಅವರ ಪಾತ್ರ ಖಡಕ್‌ ಆಗಿದೆ, ಆದರೆ ಅವರ ನಟನೆಯಲ್ಲಿ ಇನ್ನಷ್ಟು ಫೋರ್ಸ್‌ ಬೇಕಿತ್ತು. ಉಳಿದಂತೆ ಯತೀನ್‌ ಕಾರ್ಯೇಕರ್‌, ಸುಚೇಂದ್ರ ಪ್ರಸಾದ್‌, ಲೋಹಿತಾಶ್ವ, ಥ್ರಿಲ್ಲರ್‌ ಮಂಜು, ಚೇತನ್‌ ರೈ ಸೇರಿದಂತೆ ಎಲ್ಲರು ಉತ್ತಮವಾಗಿ ನಟಿಸಿದ್ದಾರೆ.

ಕಂಪ್ಲೀಟ್‌ ಮಾಸ್‌ ಮಸಾಲೆ ಅಂಶಗಳಿರುವ ಕೆಂಪೇಗೌಡ-2 ಈ ವಿಕೇಂಡ್‌ಗೆ ಪಕ್ಕಾ ಕಮರ್ಷಿಯಲ್ ಸಿನಿಮಾ, ನೋಡಿ, ಎಂಜಾಯ್ ಮಾಡಬಹುದು.

ರೇಟಿಂಗ್ – 3.25/5


Leave a Reply