ಇದು ದೊಡ್ಡವರಂತೆ ನಟಿಸಿರುವ ಮಕ್ಕಳ ಚಿತ್ರ – ‘ಗಿರ್ಮಿಟ್‌’ ಚಿತ್ರ ವಿಮರ್ಶೆ

 ಇದು ದೊಡ್ಡವರಂತೆ ನಟಿಸಿರುವ ಮಕ್ಕಳ ಚಿತ್ರ – ‘ಗಿರ್ಮಿಟ್‌’ ಚಿತ್ರ ವಿಮರ್ಶೆ

ಚಿತ್ರ : ಗಿರ್ಮಿಟ್‌
ನಿರ್ದೇಶನ ರವಿ ಬಸ್ರೂರ್‌
ನಿರ್ಮಾಣ : ಎನ್‌.ಎಸ್‌.ರಾಜ್‌ಕುಮಾರ್‌
ಸಂಗೀತ : ರವಿ ಬಸ್ರೂರ್‌
ಕ್ಯಾಮೆರಾ : ಸಚಿನ್‌ ಬಸ್ರೂರ್‌
ತಾರಾಗಣ : ಆಶ್ಲೇಷ ರಾಜ್‌, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್‌ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಂಚನ ಕೋಟೇಶ್ವರ ಮುಂತಾದವರು.ಮಕ್ಕಳು ದೊಡ್ಡವರ ಥರ ವರ್ತನೆ ಮಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಗೆ ತಕ್ಕಂತೆ ಇದೆ ಗಿರ್ಮಿಟ್‌ ಸಿನಿಮಾ. ಹಾಗಾಗಿ ಇದನ್ನು ಮಕ್ಕಳ ಚಿತ್ರ ಎನ್ನಲಾಗುವುದಿಲ್ಲ, ಮಕ್ಕಳನ್ನು ಇಟ್ಟುಕೊಂಡು ನಿರ್ದೇಶಕ ರವಿ ಬಸ್ರೂರು ಪ್ರಯೋಗ ಮಾಡಿದ್ದಾರೆ ಎನ್ನಬಹುದು.

ಶಂಕರಪ್ಪ ಮತ್ತು ಸರೋಜ ಎಂಬ ದಂಪತಿಗೆ ಇರುವ ಮೂವರು ಹೆಣ್ಣುಮಕ್ಕಳಲ್ಲಿ ಕೊನೆಯವಳು ರಶ್ಮಿ. ಈ ದಂಪತಿಯ ಮೂರು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು ಎಂದು ಓಡಾಡುತ್ತಿರುತ್ತಾರೆ. ಆದರೆ ಮೊದಲ ಮಗಳಿಗೆ ವಯಸ್ಸಾದರೂ ಮದುವೆ ಆಗಿಲ್ಲ. ಹುಡುಗ ಕೂಡ ಸಿಗುತ್ತಿಲ್ಲ. ಅಕ್ಕನ ಮದುವೆ ಆಗದೇ ಉಳಿದಿಬ್ಬರಿಗೂ ಮದುವೆ ಆಗುವುದಿಲ್ಲ ಇತ್ತ ದಾಮೋದರ ಮತ್ತು ಸುಶೀಲಾ ಎಂಬ ದಂಪತಿಯ ಏಕೈಕ ಪುತ್ರ ಆಶ್ಲೇಷ ರಾಜ್‌. ಇವರ ಮನೆಯಲ್ಲಿ ತಾಯಿಗೆ ತನ್ನ ಮನೆಗೆ ಬರುವ ಸೊಸೆ ಇಂಗ್ಲೀಷ್‌ ಮಾತನಾಡಬೇಕು ಎಂಬ ಆಸೆ ಹಾಗಾಗಿ ಆಶ್ಲೇಷ ರಾಜ್‌ಗೆ ಹೆಣ್ಣು ಸಿಗುತ್ತಿಲ್ಲ. ಇದೇ ಸಮಯದಲ್ಲಿ ಒಮ್ಮೆ ಆಶ್ಲೇಷ ರಾಜ್‌ ಮತ್ತು ರಶ್ಮಿ ಇಬ್ಬರು ಭೇಟಿಯಾಗುತ್ತಾರೆ. ಲವ್‌ ಆಗುತ್ತದೆ. ಆದರೆ, ರಶ್ಮಿ ಅಕ್ಕಂದಿರಿಗೆ ಮದುವೆಯಾಗದೇ ಇರುವುದೇ ಇವರಿಬ್ಬರ ಪ್ರೀತಿಗೆ ದೊಡ್ಡ ಅಡ್ಡಗಾಲಾಗುತ್ತದೆ. ಹಾಗಾಗಿ ನಾಯಕ ಆಶ್ಲೇಷ ತನ್ನ ಪ್ರೀತಿಯ ಹುಡುಗಿಯ ಅಕ್ಕಂದಿರ ಮದುವೆಯನ್ನು ಮಾಡಿ ತಾನು ಹುಡುಗಿಯನ್ನು ಪಡೆಯುತ್ತಾನೆ ಅದು ಹೇಗೆ ಎಂಬುದೇ ಸಿನಿಮಾದ ಕಥೆ.

ಇದರ ನಡುವೆ ಬರುವ ದೃಶ್ಯಗಳೆಲ್ಲವೂ ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಇರುವಂತೆ ಇದೆ. ಅವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿನಿಮಾದಲ್ಲಿ ನಟಿಸಿರುವ ಎಲ್ಲ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಅಭಿನಯ ನೀಡಲು ಪ್ರಯತ್ನ ಪಟ್ಟಿದ್ದಾರೆ. ಈ ಸಿನಿಮಾ ನೋಡುವಾಗ ಆಗುವ ಒಂದೇ ಒಂದು ಅಪಾಯ ಎಂದರೆ ಒಮ್ಮೆ ಕಣ್ಣು ಮುಚ್ಚಿದರೆ ಮಕ್ಕಳ ಬದಲಿಗೆ ಧ್ವನಿ ನೀಡಿರುವ ನಟರ ಸಿನಿಮಾ ನೋಡುತ್ತಿದ್ದೇವೆ ಎನಿಸುತ್ತದೆ. ಒಂದು ಪ್ರಯೋಗವಾಗಿ ಸಿನಿಮಾವನ್ನು ಒಮ್ಮೆ ನೋಡಿ ಆನಂದಿಸಬಹುದು.

ಈ ಹಿಂದೆ ರವಿ ಬಸ್ರೂರು ಕಟಕ ಎನ್ನುವ ಚಿತ್ರದಲ್ಲಿಯೂ ವಿಭಿನ್ನ ಸಬ್ಜೆಕ್ಟ್‌ನ್ನು ತೆರೆ ಮೇಲೆ ತಂದಿದ್ದರು. ಈಗ ಗಿರ್ಮಿಟ್‌ ಮೂಲಕ ಯಾರು ಮಾಡದ ಸಿನಿಮಾವೊಂದನ್ನು ಮಾಡಿದ್ದಾರೆ.

ರೇಟಿಂಗ್‌ – 3.5/5


Digiqole ad

Sunil H C

Leave a Reply