ಕನ್ನಡ ಚಿತ್ರ: ನ್ಯೂರಾನ್‌

ನಿರ್ದೇಶಕ: ವಿಕಾಸ್‌ ಪುಷ್ಪಗಿರಿ

ನಿರ್ಮಾಪಕ: ವಿನಯ್‌ಕುಮಾರ್‌

ಸಂಗೀತ:ಗುರುಕಿರಣ್‌

ಕ್ಯಾಮೆರಾ : ಶೋಯಬ್‌ ಅಹಮದ್‌

ತಾರಾಗಣ: ಯುವ, ನೇಹಾಪಾಟೀಲ್‌, ವೈಷ್ಣವಿ ಮೆನನ್‌, ಶಿಲ್ಪಾ ಶೆಟ್ಟಿ , ಜೈಜಗದೀಶ್‌, ಅರವಿಂದ್‌ ರಾವ್‌ ಮತ್ತಿತರರು

ಹೊಸ ಹೊಸ ನಿರ್ದೇಶಕರು ಹೊಸ ರೀತಿಯ ಪ್ರಯತ್ನಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ ಈ ವಾರ ಬಿಡುಗಡೆಯಾಗಿರುವ ನ್ಯೂರಾನ್‌ ಸಹ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಯ ಕೊರತೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ. 

ಸೈಂಟಿಫಿಕ್‌ ಥ್ರಿಲ್ಲರ್‌ ಎಂಬ ಮಾದರಿಯೇ ಚಿತ್ರರಂಗಕ್ಕೆಹೊಸ ಅನುಭವ ಅದನ್ನು ಕಟ್ಟಿಕೊಡಬೇಕಾದರೆ ಅದು ರೋಚಕವಾಗಿದ್ದರೆ ಮಾತ್ರ ಜನ ಇಷ್ಟಪಡುತ್ತಾರೆ. ನ್ಯೂರಾನ್‌ ಕಥೆಯ ವಿಚಾರದಲ್ಲಿ, ಅದನ್ನು ಹೇಳುತ್ತಾ ಹೋಗುವ ವಿಚಾರದಲ್ಲಿ ಹೊಸತನ ಈ ಚಿತ್ರದಲ್ಲಿದೆ. 

ಮೂವರು ಹುಡುಗಿಯರು ಮಿಸ್‌ ಆಗಿರುತ್ತಾರೆ, ಅದರಲ್ಲಿ ರಶ್ಮಿಕಾ [ನೇಹಾ ಪಾಟೀಲ್‌] ಕೂಡಾ ಒಬ್ಬಳು. ಆಕೆಯನ್ನು ಹುಡುಕುತ್ತಾ ಲಂಡನ್‌ನಿಂದ ಬರುವ ಆಕೆಯ ಪ್ರಿಯಕರ ಯುವ [ಯುವ]. ತನ್ನ ಬದುಕೇ ರಶ್ಮಿಕಾ ಎಂದು ತಿಳಿದಿದ್ದವನಿಗೆ ಆಕೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ನೀಡುತ್ತಾರೆ. ಆ ಮಾಹಿತಿಯನ್ನು ಅರಗಿಸಿಕೊಳ್ಳಲಾಗದೇ ಕುಡಿತದ ದಾಸನಾಗುವ ಯುವನಿಗೆ ಮತ್ತೊಬ್ಬಳು ಜತೆಯಾಗುತ್ತಾಳೆ, ಅವಳ್ಯಾರು, ಇದರ ನಡುವೆ ಆತನ ಬದುಕಿನಲ್ಲಿ ಅಸಹಜ ಘಟನೆಗಳು ನಡಯುತ್ತವೆ. ಅದೇನು ಮತ್ತು ಈ ಮಿಸ್ಸಿಂಗ್‌ ದೃಶ್ಯವಾಳಿಯಲ್ಲಿ ಸೈಂಟಿಫಿಕ್‌ ಥ್ರಿಲ್ಲಿಂಗ್‌ ಅಂಶವೇನು ಎಂಬುದೇ ಚಿತ್ರದ ಕಥೆ ಅದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

ನಿರ್ದೇಶಕ ವಿಕಾಸ್‌ ಹೊಸ ಕಥೆಯನ್ನು ಆಯ್ಕೆ ಮಾಡಿಕೊಂಡು ಹೊಸತನ ಮೆರೆದಿದ್ದಾರೆ ಆದರೆ ಅಂತಹದ್ದೆ ಹೊಸ ಚಿತ್ರಕಥೆಯನ್ನು ಬರೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಅಲ್ಲಲ್ಲಿ ಜಾಳು ಜಾಳು ಎನಿಸುತ್ತದೆ. 

ಇಡೀ ಸಿನಿಮಾದಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದು ಕೊನೆಯ 15 ನಿಮಿಷಗಳು. ಹಾಗಾಗಿ ಸಿನಿಮಾವನ್ನು ಪ್ರೇಕ್ಷಕ ಕಂಪ್ಲೀಟ್ ಆಗಿ ನೋಡಲೇ ಬೇಕು. 

ನಾಯಕ ನಟ ಯುವಗೆ ಇದು ಮೊದಲ ಪ್ರಯತ್ನ ಆದರೂ ಕಷ್ಟಪಟ್ಟು ಉತ್ತಮವಾಗಿ ನಟಿಸುವ ಪ್ರಯತ್ನ ಮಾಡಿದ್ದಾರೆ.. ವೈಷ್ಣವಿ ಮೆನನ್‌, ಶಿಲ್ಪಾಶೆಟ್ಟಿ  ಮತ್ತು ನೇಹಾ ಪಾಟೀಲ್‌ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ. ರಂಗಿತರಂಗ ಅರವಿಂದ್‌, ಮತ್ತು ಕಬೀರ್‌ ಸಿಂಗ್‌ ದುಹಾನ್‌ ಅವರದ್ದು ಖಡಕ್‌ ಅಭಿನಯ. ಹಿನ್ನೆಲೆ ಸಂಗೀತ ಸಿನಿಮಾಗೆ ಪೂರಕವಾಗಿದೆ. ಉಳಿದಂತೆ ಸಿನಿಮಾದಲ್ಲಿ ಹೊಸ ಮಾದರಿಯ ಕಥೆ ಇರುವುದರಿಂದ ಒಮ್ಮೆ ನೋಡಲು ಅಡ್ಡಿಯಿಲ್ಲ.

ರೇಟಿಂಗ್ – 3.25/5.


Leave a Reply