ಬೀದರ್ ಜಿಲ್ಲೆಯ ಬಳಿ ಇರುವ ಒಂದು ನದಿಯ ಹೆಸರು ಮಾಂಜ್ರಾ, ಬೆಳಗಾಂ ಜಿಲ್ಲೆಯ ಗ್ರಾಮದಲ್ಲಿ ನಡೆದಂತಹ ಒಂದು ನೈಜ ಪ್ರೇಮಕಥಾನಕವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರದ ಹೆಸರು ಕೂಡ ಮಾಂಜ್ರಾ. ತೆಲುಗಿನ ಮುತ್ತುರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದು ಆಕ್ಷ್ಯನ್ ಕಟ್ ಹೇಳಿದ್ದಾರೆ. ಬೆಳಗಾಂ ಮೂಲದವರೇ ಆದ ರಂಜಿತ್‍ಸಿಂಗ್ ಹಾಗೂ ಅಪೂರ್ವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಖಳನಾಯಕನಾಗಿ ರಂಜನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ.

ಕಳೆದ ವಾರ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಿತು. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ನರ್ಸ್ ಜಯಲಕ್ಷ್ಮಿ ಹಾಗೂ ಲಹರಿ ವೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಂಜ್ರಾ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಶೇಷವಾಗಿ ಈ ಸಮಾರಂಭಕ್ಕೆ ಘಟನೆಯ ಮೂಲ ವ್ಯಕ್ತಿ ಶಂಕರ್‍ರನ್ನು ಕರೆತರಲಾಗಿತ್ತು. ಆದರೆ ಆತ ಈಗ ಮಾನಸಿಕ ಅಸ್ವಸ್ಥನಾಗಿದ್ದು ಏನೊಂದೂ ಮಾತನಾಡದ ಸ್ಥಿತಿಯಲ್ಲಿದ್ದ.

ಈ ಸಂದರ್ಭದಲ್ಲಿ ನಿರ್ದೇಶಕ ಮುತ್ತುರಾಜ್ ಮಾತನಾಡುತ್ತ ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಪ್ರೇಮ ಪ್ರಕರಣವನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ಇದು ಬೆಳಗಾವಿಯ ಗ್ರಾಮೀಣ ಭಾಗದಲ್ಲಿ ನಡೆದ ನೈಜ ಪ್ರೇಮಕಥೆ, ಖಳನಟ ರಂಜನ್ ನನ್ನ ಸ್ನೇಹಿತರು ಅವರ ಮೂಲಕ ನಿರ್ಮಾಪಕ ರವಿ ಪೂಜಾರ್ ಅವರು ಸಿಕ್ಕಿದರು. ಈ ಕಥೆ ನಡೆದ ಊರಿನಲ್ಲಿ, ಆ ಹುಡುಗಿ ವಾಸವಿದ್ದ ಮನೆಯಲ್ಲಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದ ನಾಯಕ ಒಬ್ಬ ಹಿಂದೂ. ನಾಯಕಿ ಮರಾಠಿಯವಳು. ಇವರಿಬ್ಬರ ನಡುವಿನ ದುರಂತ ಪ್ರೇಮಕಥೆ ಈ ಚಿತ್ರದಲ್ಲಿದೆ. ಬೆಳಗಾಂ, ಕಾರವಾರ, ಕೇರಳ ಹಾಗೂ ಗೋವಾ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.

ನಾಯಕ ನಟ ರಂಜಿತ್ ಮಾತನಾಡಿ ಈ ಹಿಂದೆ ಕೆಲ ಸೀರಿಯಲ್‍ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದೆ, ಇದೇ ಮೊದಲಬಾರಿಗೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನೀನಾಸಂ ರಂಗಶಾಲೆಯಲ್ಲಿ ಆಕ್ಟ್ಯಿಂಗ್ ಕಲಿತ ರಂಜಿತ್ ಈ ಚಿತ್ರದಲ್ಲಿ ದುರಂತ ನಾಯಕನಾಗಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಮೂಲತ: ಮರಾಠಿ ಹುಡುಗಿಯಾದ ನಾಯಕಿ ಅಪೂರ್ವ ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲೂ ಸಹ ನಾನು ಮರಾಠಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇವೆ , ದುರಂತ ನಾಯಕಿಯ ಪಾತ್ರ ಎಂದು ಹೇಳಿಕೊಂಡರು.

ಈ ಚಿತ್ರವನ್ನು ರವಿ ಅರ್ಜುನ್ ಪೂಜಾರ್ ಅವರು ನಿರ್ಮಾಣ ಮಾಡಿದ್ದಾರೆ. ಸವದತ್ತಿ ಮೂಲದ ರವಿ ಅರ್ಜುನ್ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ರಂಜನ್ ಮೂಲಕ ಈ ನಿರ್ದೇಶಕರು ಪರಿಚಯವಾಗಿ ಕಥೆ ಹೇಳಿದರು. ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ.  ಮುಗ್ಧ ಪ್ರೇಮಿಗಳು ಹಿರಿಯರ ಸ್ವಾರ್ಥಕ್ಕೆ ಹೇಗೆ ಬಲಿಯಾದರು ಎಂದು ಈ ಚಿತ್ರ ಹೇಳುತ್ತದೆ.  ಚಿನ್ಮಯ್ ಎಂ. ರಾವ್ ಈ ಚಿತ್ರದ ಹಾಡುಗಳಿಗೆ 4  ಹಾಡುಗಳಿಗೆ  ಸಂಗೀತ ಸಂಯೋಜನೆ ಮಾಡಿದ್ದಾರೆ. 

Leave a Reply