ಸೆಟ್ಟೇರಿತು ಶಿವರಾಜಕುಮಾರ್ ಅಭಿನಯದ “ನೀ ಸಿಗೋವರೆಗೂ”

 ಸೆಟ್ಟೇರಿತು  ಶಿವರಾಜಕುಮಾರ್ ಅಭಿನಯದ “ನೀ ಸಿಗೋವರೆಗೂ”

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ೧೨೪ ನೇ ಚಿತ್ರದ ಮುಹೂರ್ತ ಸಮಾರಂಭ ನಗರದ ಶೆರಟನ್ ಹೋಟೆಲ್ ನಲ್ಲಿ ನೆರವೇರಿತು. ಈ ಚಿತ್ರಕ್ಕೆ “ನೀ ಸಿಗೋವರೆಗೂ” ಎಂದು ಹೆಸರಿಡಲಾಗಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಬಾದ್ ಶಾ ಕಿಚ್ಚ ಸುದೀಪ ಆರಂಭ ಫಲಕ ತೋರಿದರು. ಶ್ರೀಮತಿ ಗೀತಾ ಶಿವರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.


ಇದೊಂದು ಪಕ್ಕ ಎಮೋಷನಲ್ ಲವ್ ಸ್ಟೋರಿ ಅಂತ ಹೇಳಬಹುದು ಎಂದ ನಿರ್ದೇಶಕ ರಾಮ್ ಧುಲಿಪುಡಿ , ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಇದು ಶಿವರಾಜಕುಮಾರ್ ಅವರು ನಟಿಸುತ್ತಿರುವ ೧೨೪ ನೇ ಚಿತ್ರ ಅಂತ ತಿಳಿದು ಆಶ್ಚರ್ಯವಾಯಿತು. ಅದರಲ್ಲೂ ಪ್ರೇಮಕಥೆಯ ಚಿತ್ರಕ್ಕೆ ನಾಯಕನಾಗಿ ಅಭಿನಯಿಸುತ್ತಿರುವುದು ಹೆಚ್ಚು ಸಂತಸ ತಂದಿದೆ. ನಾವೆಲ್ಲ ನಮ್ಮ ೧೨೪ ನೇ ಸಿನಿಮಾದಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇವೊ, ಏನೋ? ಆದರೆ ಶಿವಣ್ಣ ಈಗಲೂ ನಾಯಕನಾಗಿ ನಟಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ನಿಷ್ಠೆ. ಅವರು ಇನ್ನೂ ಎಷ್ಟು ಚಿತ್ರಗಳಲ್ಲಿ ಅಭಿನಯಿಸುವರೋ ಅಷ್ಟು ಚಿತ್ರಗಳಲ್ಲೂ ನಾಯಕರಾಗಿ ನಟಿಸಲಿ ಎಂದು ಕಿಚ್ಚ ಸುದೀಪ ಹಾರೈಸಿದರು.

ನನ್ನ ಚಿತ್ರಕ್ಕೆ ಶುಭ ಹಾರೈಸಲು ಬಂದಿರುವ ಸುದೀಪ ಅವರಿಗೆ ತುಂಬಾ ಧನ್ಯವಾದ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್ , ಇದೊಂದು ಎಮೋಷನಲ್ ಲವ್ ಸ್ಟೋರಿ.‌ ನನ್ನದು ಇದರಲ್ಲಿ ಎರಡು ರೀತಿ ಪಾತ್ರ. ನಿರ್ದೇಶಕರು ಚಿತ್ರಕಥೆ ಹೆಣೆದಿರುವ ರೀತಿ ತುಂಬಾ ಚೆನ್ನಾಗಿದೆ.‌ ಇದೇ ಹತ್ತೊಂಬತ್ತರಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ, ವಾರಣಾಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.


ಮೆರ್ಹಿನ್ ಫಿರ್ಜಾದ ನಾಯಕಿಯಾಗಿ ನನ್ನೊಂದಿಗೆ ನಟಿಸಲಿದ್ದಾರೆ. ನಾಜರ್, ಸಂಪತ್ ಕುಮಾರ್, ಮಂಗ್ಲಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ನನ್ನೊಂದಿಗೆ ” ಟಗರು ” ಚಿತ್ರದಲ್ಲಿ ಕೆಲಸ ಮಾಡಿದ್ದ, ಚರಣ್ ರಾಜ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಆ ಚಿತ್ರದ ಛಾಯಾಗ್ರಹಕ ಮಹೇಂದ್ರ ಸಿಂಹ ಈ ಚಿತ್ರಕ್ಕೂ ಛಾಯಾಗ್ರಹಕರಾಗಿದ್ದಾರೆ ಎಂದು ತಮ್ಮ ಪಾತ್ರ ಹಾಗೂ ಚಿತ್ರತಂಡವನ್ನು ಪರಿಚಯಿಸಿದ ಶಿವಣ್ಣ, ಇಂತಹ ಸಂದರ್ಭದಲ್ಲಿ(ಕೊರೋನ) ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ನಾಯಕಿ ಮರ್ಹಿನ್ ಫಿರ್ಜಾದ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿ, ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು.

ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ನರಾಲ ಶ್ರೀನಿವಾಸ್ ರೆಡ್ಡಿ , ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಅವರು ಮಾಧ್ಯಮದ ಮುಂದೆ ಚಿತ್ರದ ಕುರಿತು ಕೆಲವು ಮಾಹಿತಿ‌ ನೀಡಿ, ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು.

ಕಾರ್ಯಕಾರಿ ನಿರ್ಮಾಪಕ ಕುಡಿಪುಡಿ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ , ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಕಲಾ ನಿರ್ದೇಶಕ ರವಿ ಸಂತೆಹಕ್ಲು ತಮ್ಮ ಕಾರ್ಯಗಳ ಕುರಿತು ಮಾತನಾಡಿದರು.

ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ “ನೀ ಸಿಗೋವರೆಗೂ” ಚಿತ್ರ ನಿರ್ಮಾಣವಾಗಲಿದೆ. ಇದೇ ಸಂದರ್ಭದಲ್ಲಿ ನಿರ್ಮಾಪಕ ನರಾಲ ಶ್ರೀನಿವಾಸ್ ರೆಡ್ಡಿ ಅವರು ತಮ್ಮ ಹುಟ್ಟುಹಬ್ಬವನ್ನು ಚಿತ್ರತಂಡದೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.


Digiqole ad

Sunil H C

Leave a Reply