ಆಧುನಿಕ ಲಂಕೆಯಲ್ಲಿ ಮಾಸ್ ಕಥೆ – ಚಿತ್ರ ವಿಮರ್ಶೆ

 ಆಧುನಿಕ ಲಂಕೆಯಲ್ಲಿ ಮಾಸ್ ಕಥೆ – ಚಿತ್ರ ವಿಮರ್ಶೆ

ಲಂಕೆ ಎಂದ ತಕ್ಷಣ ಭಾರತೀಯರಿಗೆ ರಾಮಾಯಣವೇ ಜ್ಞಾಪಕಕ್ಕೆ ಬರುತ್ತದೆ. ಅದೇ ಟೈಟಲ್ ಇಟ್ಟುಕೊಂಡು ಈ ವಾರ ಸಿನಿಮಾವೊಂದು ಬಿಡುಗಡೆಯಾಗಿದೆ. ರಾಮಾಯಣ ಎಂದಾಕ್ಷಣ ಈ ಲಂಕೆಯಲ್ಲಿ ರಾಮಾಯಣದ ಕಥೆ ಇದು ಎಂದುಕೊಂಡು ಹೋದರೆ ಅದು ಹೋದವರ ತಪ್ಪಾಗುತ್ತಿದೆ.


ಸಿನಿಮಾಗಳೆಂದರೆ ಮನರಂಜನೆಯೇ ಮುಖ್ಯ ಉದ್ದೇಶ.ಲಂಕೆ ಸಿನಿಮಾದಲ್ಲಿ ಆ ಉದ್ದೇಶ ಸಂಪೂರ್ಣವಾಗಿ ಈಡೇರಿಸಲು ನಿರ್ದೇಶಕರು ಕೊಂಚ ಹೆಚ್ಚಾಗಿಯೇ ಖರ್ಚು ಮಾಡಿದ್ದಾರೆ. ಇದೇ ಕಾರಣಕ್ಕೆ ಹಲವು ಪ್ರಮುಖ ಕಲಾವಿದರನ್ನು ಈ ಸಿನಿಮಾದಲ್ಲಿ ಒಟ್ಟುಗೂಡಿಸಿದ್ದಾರೆ.

ಏರಿಯಾ ಒಂದರಲ್ಲಿ ವೈಶ್ಯಾವಾಟಿಕೆ ಅಡ್ಡ, ಆ ಅಡ್ಡಕ್ಕೆ ರಾಜಕೀಯ ನಾಯಕರು ಮತ್ತು ಪೊಲೀಸರ ಕಾವಲು. ಆ ಅಡ್ಡೆಯ ಮಾಲಕಿಗೆ ರಾಜಕೀಯ ಸೇರುವಾಸೆ. ಅದಕ್ಕಾಗಿ ಸಮಾಜ ಸೇವೆ ಎಂಬ ಸೋಗು. ಈ ಅಡ್ಡೆಯೊಳಗೆ ನಾಯಕ ನಟ ಮತ್ತು ನಾಯಕಿ ಇಬ್ಬರೂ ಸಿಲುಕಿಕೊಳ್ಳುತ್ತಾರೆ. ನಾಯಕನಿಗೂ ಈ ಅಡ್ಡೆಗೂ ಹಳೇಯ ಲಿಂಕ್ ಇರುತ್ತದೆ. ಅದೇನು, ಆ ಸುಳಿಯಿಂದ ನಾಯಕ ನಾಯಕಿ ಹೊರುಬರುತ್ತಾರೋ ಹೇಗೋ, ಅದರೊಳಗೆ ಸಿಲುಕಿದ್ದು ಹೇಗೆ ಎಂಬೆಲ್ಲ ವಿವರಗಳು ಕೊಂಚ ಇಂಟ್ರೆಸ್ಟಿಂಗ್ ಆಗಿವೆ ಅವುಗಳನ್ನು ಸಿನಿಮಾದಲ್ಲಿಯೇ ನೋಡಬೇಕು.

ರಾಮ್ ಪ್ರಸಾದ್ ಅವರಿಗೆ ನಿರ್ದೇಶನದಲ್ಲಿ ಇದು ಮೊದಲ ಸಿನಿಮಾ. ಆದರೆ ಮಾಸ್ ಪ್ರೇಕ್ಷಕರು ಇಷ್ಟಪಡುವಂತಹ ಮೇಕಿಂಗ್ ಮತ್ತು ದೃಶ್ಯಗಳನ್ನು ಹೆಣೆದಿದ್ದಾರೆ. ಕಥೆಯ ವಿಚಾರದಲ್ಲಿ ಕೊಂಚ ಜಾಣ್ಮೆ ವಹಿಸಬಹುದಿತ್ತು. ಸಿನಿಮಾಟೋಗ್ರಫಿ, ಸಂಗೀತ ಎಲ್ಲವೂ ಸಿನಿಮಾದಲ್ಲಿ ಚೆನ್ನಾಗಿಯೇ ಇದೆ. ಸಿನಿಮಾದ ಹೈಲೈಟ್ ಎಂದರೆ ಹಿನ್ನೆಲೆ ಸಂಗೀತ. ಕಾರ್ತಿಕ್ ಶರ್ಮಾ ಭವಿಷ್ಯದಲ್ಲಿ ಸ್ಯಾಂಡಲ್‌ವುಡ್‌ಗೆ ಒಳ್ಳೆಯ ಸಂಗೀತ ನಿರ್ದೇಶಕರಾಗುವ ಲಕ್ಷಣ ಇದೆ.

ನಟ ಯೋಗಿ ತಮ್ಮ ಎಂದಿನ ನಟನೆ ಮಾಡಿದ್ದಾರೆ. ನೋಡಲು ಕೊಂಚ ಮೆಚುರ್ಡ್‌ ಆಗಿ ಕಾಣುವ ಯೋಗಿ ಗ್ಯಾಪ್ ನಂತರ ಮಾಸ್ ಆಗಿ ಪ್ರೇಕ್ಷಕರೆದುರು ಬಂದಿದ್ದರೆ. ಕೃಷಿ ತಾಪಂಡಗೆ ಹೆಚ್ಚು ಕೆಲಸವಿಲ್ಲ ಆದರೂ ಹಾಡುಗಳಲ್ಲಿ ಮಿಂಚುತ್ತಾರೆ. ಕಾವ್ಯ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಸಂಚಾರಿ ವಿಜಯ್ ಅವರ ಕೆಲ ದೃಶ್ಯಗಳು ಓಕೆ ಆದರೆ ಕೆಲ ದೃಶ್ಯಗಳಂತೂ ಅನವಶ್ಯಕ ಎನಿಸುತ್ತದೆ. ಇನ್ನುಳಿದ ಕಲಾವಿದರದ್ದು, ಶಿಸ್ತಿನ ಕೆಲಸ.

ಹಸಿ ಬಿಸಿ  ದೃಶ್ಯಗಳು ಕೊಂಚ ಹೆಚ್ಚಾಗಿವೆ.  ಕೆಲ ದೃಶ್ಯಗಳನ್ನಂತು ಸುಲಭವಾಗಿ ಕತ್ತರಿಸಬಹುದಿತ್ತು.  ಬಿ ಮತ್ತು ಸಿ ಕ್ಲಾಸ್ ಆಡಿಯನ್ಸ್ ಅನ್ನು ಸೆಳೆಯುವ ಸಲುವಾಗಿ ಈ ರೀತಿಯ ದೃಶ್ಯಗಳನ್ನು ಹೆಚ್ಚಾಗಿಟ್ಟಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿಯುತ್ತದೆ.  ಇವುಗಳ ಜತೆಗೆ ಕಥೆಯೂ ಸಹ ಬಹಳ ವರ್ಷಗಳ ಹಿಂದೆ ಬಂದು ಹೋದ ಎಷ್ಟೋ ಸಿನಿಮಾಗಳಲ್ಲಿ ನೋಡಿದ್ದೇವೆ ಎನಿಸುತ್ತದೆ. ಆದರೂ ಯೋಗಿ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗುತ್ತದೆ .

ರೇಟಿಂಗ್ : 3.25/5


Digiqole ad

Sunil H C

Leave a Reply