‘ವೆಡ್ಡಿಂಗ್‌ ಗಿಫ್ಟ್‌’ ಚಿತ್ರ ವಿಮರ್ಶೆ -ಸಿನಿಲೋಕ

 ‘ವೆಡ್ಡಿಂಗ್‌ ಗಿಫ್ಟ್‌’ ಚಿತ್ರ ವಿಮರ್ಶೆ -ಸಿನಿಲೋಕ

ಮಹಿಳಾ ಪ್ರಧಾನ ಸಿನಿಮಾಗಳೇ ಹೆಚ್ಚಾಗಿರುವ ಹೊತ್ತಿನಲ್ಲಿ ಪುರಷರ ಹಿತರಕ್ಷಣೆಯೂ ಎಷ್ಟು ಮುಖ್ಯ ಮತ್ತು ಮಹಿಳೆಯರು ಪುರುಷರ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ ಎಂಬುದನ್ನು ತಿಳಿಸುವ ಸಲುವಾಗಿಯೇ ‘ವೆಡ್ಡಿಂಗ್‌ ಗಿಫ್ಟ್‌ ಸಿನಿಮಾ ಮಾಡಲಾಗಿದೆ. ಅದು ಈ ವಾರ ಬಿಡುಗಡೆಯಾಗಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಇರುವ 498 ಎ ಕಾಯ್ದೆಯನ್ನು ಕೆಲ ಯುವತಿಯರು, ಪತ್ನಿಯರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾ ಮೂಲಕ ಹೇಳುವ ಸಣ್ಣ ಪ್ರಯತ್ನವೇ ‘ವೆಡ್ಡಿಂಗ್‌ ಗಿಫ್ಟ್‌’. ವಿಲಾಸ್‌ [ನಿಶಾನ್‌ ನಾಣಯ್ಯ] ಯಶಸ್ವಿ ಉದ್ಯಮಿ ಅಕಾಂಕ್ಷ [ ಸೋನುಗೌಡ] ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುವ ಯುವತಿ. ಬರೀ ತನ್ನ ಧ್ವನಿಯಿಂದಲೇ ವಿಲಾಸ್‌ನನ್ನು ಬುಟ್ಟಿಗೆ ಬೀಳಿಸಿಕೊಳ್ಳುವ ಅಕಾಂಕ್ಷ, ತದ ನಂತರ ಕೊಡುವ ಕಷ್ಟಗಳಿಂದಾಗಿ ಬುಟ್ಟಿಗೆ ಬಿದ್ದ ವಿಲಾಸ್‌ ವಿಲ ವಿಲನೆ ಒದ್ದಾಡುವಂತಾಗುತ್ತದೆ. ಹೀಗೆ ಒದ್ದಾಡುತ್ತಿರುವವನಿಗೆ 498 ಎ ಕಾಯ್ದೆ ಕೂಡಾ ಮಾರಕವಾಗುತ್ತದೆ. ಅದು ಹೇಗೆ ಮತ್ತು ಅದರಿಂದ ವಿಲಾಸ್‌ ತಪ್ಪಿಸಿಕೊಳ್ಳುತ್ತಾನಾ ಎಂಬುದೇ ಸಿನಿಮಾದ ಕುತೂಹಲ.


ನಿರ್ದೇಶಕ ವಿಕ್ರಮ್‌ ಪ್ರಭು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಕಥೆಯನ್ನು ಆಯ್ದುಕೊಂಡಿದ್ದಾರೆ. ಆದರೆ ಅವರು ಆಯ್ದುಕೊಂಡ ಕಥೆಯನ್ನು ಇನ್ನೊಂಚೂರು ಸರಿಯಾಗಿ ನಿರೂಪಿಸಬಹುದಿತ್ತು ಎನಿಸುತ್ತದೆ. ಸಿನಿಮಾದ ಸೆಕೆಂಡ್‌ ಹಾಫ್‌ ಕೋರ್ಟ್‌ ರೂಮ್‌ ಡ್ರಾಮಾದಲ್ಲಿಯೇ ಸಾಗುತ್ತದೆ. ಕೋರ್ಟ್‌ ಸನ್ನಿವೇಶಗಳಲ್ಲಿ ಘನವಾಗಿರಬೇಕಾದ ಸಂಭಾಷಣೆಗಳು ಅಲ್ಲಲ್ಲಿ ತೂಕ ಕಳೆದುಕೊಂಡಂತೆ ಭಾಸವಾಗುತ್ತದೆ. ವೆಡ್ಡಿಂಗ್‌ ಗಿಫ್ಟ್‌ ಒಂದು ಕೌಟುಂಬಿಕ ಚಿತ್ರ ಜತೆಗೆ ಸಸ್ಪೆನ್ಸ್ ಥ್ರಿಲ್ಲಿಂಗ್‌ ಎಲಿಮೆಂಟ್‌ ಇರುವಂತಹ ಸಿನಿಮಾ ಕೂಡಾ ಆಗುತ್ತದೆ. ಹಲವು ದೃಶ್ಯಗಳನ್ನು ವಿಕ್ರಮ್‌ ಪ್ರಭು ಥ್ರಿಲ್ಲಿಂಗ್‌ ಆಗಿ ಕಟ್ಟಿಕೊಟ್ಟಿದ್ದಾರೆ.

ನಿಶಾನ್‌ ನಾಣಯ್ಯ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದರೂ, ನಮ್ಮವರೆ ಎನಿಸುತ್ತಾರೆ. ಅಮಾಯಕ ಪತಿಯ ಪಾತ್ರದಲ್ಲಿ ಅವರ ನಟನೆ ಚೆನ್ನಾಗಿದೆ. ಸೋನುಗೌಡ ಪಾತ್ರದಲ್ಲಿ ವೈವಿಧ್ಯತೆ ಇದ್ದು, ಮೊದಲ ಬಾರಿಗೆ ನೆಗೆಟಿವ್‌ ಇಮೇಜ್‌ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ತಾವೊಬ್ಬ ಉತ್ತಮ ಕಲಾವಿದೆ ಎಂಬುದನ್ನು ನಿರೂಪಿಸಿದ್ದಾರೆ. ಅಚ್ಯುತ್‌ ಕುಮಾರ್‌, ಪವಿತ್ರಾ ಲೊಕೇಶ್‌ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಟಿ ಪ್ರೇಮಾ ಬಹಳ ದಿನಗಳ ನಂತರ ತೆರೆ ಮೇಲೆ ಬಂದಿದ್ದಾರೆ. ನಟನೆಯಲ್ಲಿ ಅವರದ್ದು ಎಂದಿನಂತೆ ಉತ್ತಮ ಪರ್ಫಾಮೆನ್ಸ್‌ ಆದರೆ ಸಂಭಾಷಣೆ ಒಪ್ಪಿಸಿರುವ ಶೈಲಿ ಅಷ್ಟೇನು ಉತ್ತಮವಾಗಿಲ್ಲ. ಹಿನ್ನೆಲೆ ಸಂಗೀತ ಉತ್ತಮವಾಗಿದ್ದು, ಸಿನಿಮಾಟೋಗ್ರಫಿಯೂ ಕಥೆಗೆ ಪೂರಕವಾಗಿದೆ. ಪುರುಷರ ಮೇಲೂ ದೌರ್ಜನ್ಯವಾಗುತ್ತದೆ ಎಂಬುದನ್ನು ತಿಳಿಯಲು ಈ ಸಿನಿಮಾವನ್ನೊಮ್ಮೆ ನೋಡಬೇಕು.

ರೇಟಿಂಗ್- 3/5


Digiqole ad

Sunil H C

Leave a Reply